Importance of early treatment
ಲಕ್ವಕ್ಕೆ ಶೀಘ್ರ ಚಿಕಿತ್ಸೆ ಏಕೆ ಬೇಕು
ಲಕ್ವ ಹೊಡೆದ ತಕ್ಷಣ ಮಿದುಳಿನ ಆ ಭಾಗದ ಎಲ್ಲಾ ಕೋಶಗಳೇನೂ ಸಾಯುವುದಿಲ್ಲ. ಆಮ್ಲಜನಕದ ಕೊರತೆಇಂದಾಗಿ ಮೊದಲಿಗೆ ಮಧ್ಯಭಾಗದಲ್ಲಿರುವ ಕೋಶಗಳು ಮಾತ್ರ ಘಾಸಿಗೊಳ್ಳುತ್ತವೆ. ಅವುಗಳ ಸುತ್ತ ಇರುವ ಹೊರಗಿನ ಕೋಶಗಳು ನಿಶ್ಚೇತನ ಹೊಂದಿರುತ್ತವೆ ಹೊರತು ಸತ್ತಿರುವುದಿಲ್ಲ. ಇವುಗಳನ್ನು ಸ್ವಲ್ಪಮಟ್ಟಿಗೆ ಪುನಶ್ಚೇತನ ಗೊಳಿಸಬಹುದು. ರಕ್ತಪೂರೈಕೆ ಇಲ್ಲದೆ ಇವು ೨೦ ನಿಮಿಷಗಳವರೆಗೂ ಬದುಕಬಹುದು. ಬೇರೆ ಮಾರ್ಗದಿಂದ ರಕ್ತಸಂಚಾರ ದೊರೆತಲ್ಲಿ ೬ -೮ ಗಂಟೆಗಳವರೆಗೂ ಇವನ್ನು ಕಾರ್ಯಚೇತನ ಗೊಳಿಸಬಹುದು. ಹೀಗಾಗಿ ಲಕ್ವದ ಶೀಘ್ರ ಚಿಕಿತ್ಸೆ ಬಹಳ ಮುಖ್ಯವಾದದ್ದು. ರಕ್ತಸಂಚಾರ ಈ ಶೀಘ್ರ ಸಮಯದಲ್ಲೇ ಪುನಃ ಪ್ರಾರಂಭಿಸುವುದರಿಂದ ಲಕ್ವದಿಂದ ಉಂಟಾಗುವ ಕಾರ್ಯಚಟುವಟಿಕೆಗಳ ತೊಂದರೆಗಳನ್ನು ಕಡಿಮೆ ಮಾಡಬಹುದು.
ಆದ್ದರಿಂದ ಲಕ್ವ ಹೊಡೆದ ವ್ಯಕ್ತಿಯನ್ನು ಆದಷ್ಟೂ ಬೇಗ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಗತ್ಯ. ಆಸ್ಪತ್ರೆಯಲ್ಲಿ ಅವರಿಗೆಬೇಕಾದ ವಿಶೇಷ ಚಿಕಿತ್ಸೆ ನೀಡಿ ಲಕ್ವ ಇನ್ನೂ ಹೆಚ್ಚಾಗದಂತೆ ತಡೆಯಬಹುದು ಮತ್ತು ಲಕ್ವದ ಅಡ್ಡ ಪರಿಣಾಮಗಳ ತೀವ್ರತೆಯನ್ನು ಕಡಿಮೆಮಾಡಬಹುದು.

